100 Gade Matugalu in Kannada – ಜಗತ್ತಿನ ಎಲ್ಲಾ ಭಾಷೆಗಳಲ್ಲಿ ನಾಣ್ಣುಡಿ ಅಥವಾ ಗಾದೆ ಮಾತುಗಳಿಗೆ ವಿಶೇಷ ಸ್ಥಾನವಿದೆ. ಜನರ ಜೀವನಾನುಭವದ ಮೂಸೆಯಲ್ಲಿ ಮೂಡಿಬರುವ ಇವು ಸಮಾಜದ ಓರೆ-ಕೋರೆಗಳನ್ನು ತಿದ್ದುವ ಸಾಧನದಂತೆ ಕೆಲಸ ಮಾಡುತ್ತವೆ. ಸಾಹಿತ್ಯ ಪ್ರಕಾರಗಳಲ್ಲಿ ಒಂದಾಗಿರುವ ಜನಪದ ಸಾಹಿತ್ಯದಲ್ಲಿ ಗಾದೆಗಳಿಗೆ ಮಹತ್ವದ ಸ್ಥಾನ ಕೊಡಲಾಗಿದೆ. ಮೇಲ್ನೋಟಕ್ಕೆ ಸಾಮಾನ್ಯವಾದ ಹೇಳಿಕೆ ಮಾತುಗಳೆಂದು ಕಂಡುಬಂದರೂ ಇವುಗಳಿಗೆ ವಿಶಾಲವಾದ ಅರ್ಥವಿದೆ. ಗಾದೆಗಳು ಜ್ಞಾನದ ಆಗರ, ದಿನನಿತ್ಯದ ಜನಜೀವನದ ಮೇಲೆ ಬೆಳಕು ಚೆಲ್ಲುತ್ತವೆ. ಗಾದೆಗಳು ಅಂತರಂಗದ ಜೀವನಕ್ಕೆ ಕನ್ನಡಿ ಹಿಡಿದಂತಿವೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತು ಗಾದೆಯ ಮಹತ್ವವನ್ನು ತಿಳಿಸುತ್ತದೆ.
ಕನ್ನಡ ಮಾತನಾಡುವ ಜನರ ಬಾಯಿಯಲ್ಲಿ ಹರಿದಾಡುವ ಮಹತ್ವದ ನಾಣ್ಣುಡಿಗಳನ್ನು ಇಲ್ಲಿ ಸಂಗ್ರಹಿಸಿ ಕೊಟ್ಟಿದ್ದೇವೆ.
- ದಯವೇ ಧರ್ಮದ ಮೂಲ
- ಕೂತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು
- ಹಲ್ಲಿದ್ದವಂಗೆ ಕಡಲೆ ಇಲ್ಲ, ಕಡಲೆ ಇದ್ದವವಂಗೆ ಹಲ್ಲಿಲ್ಲ
- ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲುದ್ದ ನೀರು
- ತೋಳ ಹಳ್ಳಕ್ಕೆ ಬಿದ್ದಾಗ ಕೇರಿಗೊಂದು/ ಆಳಿಗೊಂದು ಕಲ್ಲು
- ಮಾತು ಬೆಳ್ಳಿ, ಮೌನ ಬಂಗಾರ
- ಕೊಟ್ಟು ಕೆಟ್ಟವರಿಲ್ಲ, ತಿಂದು ಹಳಿದವರಿಲ್ಲ
- ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು
- ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಹಾಗೆ
- ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ
- ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ
- ಹಾವು ಸಾಯಬಾರದು ಕೋಲು ಮುರಿಯಬಾರದು
- ಮೀನಿನ ಮರಿಗೆ ಈಜು ಕಲಿಸಬೇಕೇ ?
- ಅಲ್ಪನಿಗೆ ರಾಜ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದ
- ಮಾಡಿದ್ದುಣ್ಣೆ ಮಹಾರಾಯ
- ಆಕಳು ಕಪ್ಪಾದರೆ ಹಾಲು ಕಪ್ಪೇ (ಗುಣಕ್ಕೆ ದೋಷವಿಲ್ಲ)
- ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು (ಮಾತಿನ ಪ್ರಾಮುಖ್ಯತೆ)
- ಕೈಗೆ ನಿಲುಕದ ದ್ರಾಕ್ಷಿ ಹುಳಿ (ಅಭಾವ ವೈರಾಗ್ಯ)
- ಆರೋಗ್ಯವೇ ಭಾಗ್ಯ (ಆರೋಗ್ಯವೇ ಮಿಗಿಲು)
- ಮನೋರೋಗಕ್ಕೆ ಮದ್ದಿಲ್ಲ
- ಒಕ್ಕಣ್ಣನ ರಾಜ್ಯಕ್ಕೆ ಹೋದರೆ ಒಂದು ಕಣ್ಣು ಮುಚ್ಚಿ ನಡೆಯಬೇಕು (ಸಮಾಜವನ್ನು ಅನುಸರಿಸಿ ನಡೆಯಬೇಕು)
- ಚಿಂತೆಗೂ ಚಿತೆಗೂ ವ್ಯತ್ಯಾಸ ಶೂನ್ಯ (ಎರಡೂ ಮನುಷ್ಯನನ್ನು ನಾಶಗೊಳಿಸುತ್ತವೆ.)
- ಕಾಮಾಲೆ ಕಣ್ಣಿಗೆ ಜಗತ್ತೆಲ್ಲ ಹಳದಿ (ತನ್ನ ದೋಷವನ್ನು ಇತರರಲ್ಲೂ ಕಾಣುವುದು)
- ಕುಣಿಯಲು ಬಾರದವಳು ನೆಲ ಡೊಂಕು ಎಂದಳು (ತಮ್ಮ ದೋಷವನ್ನು ಅರಿಯದವರು)
- ಸಮಯಕ್ಕಾದವ ನೆಂಟ, ಕೆಲಸಕ್ಕೊದಗಿದವ ಭಂಟ (ಸಮಯದಲ್ಲಿ ಒದಗಿದ ಸಹಾಯವೇ ಶ್ರೇಷ್ಠ)
- ಹೂವಿನಿಂದ ನಾರು ಸ್ವರ್ಗ ಕಂಡಿತು (ಸಹವಾಸದಿಂದ ಕ್ಷುಲ್ಲಕ ವಸ್ತು ಪಾವನ)
- ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಂತೆ (ನಾವಾಗಿಯೇ ಆಪತ್ತನ್ನು ತಂದುಕೊಂಡಂತೆ)
- ವಿನಾಶಕಾಲೇ ವಿಪರೀತ ಬುದ್ದಿ (ವಿನಾಶ ಕಾಲಕ್ಕೆ ಬುದ್ಧಿ ಭ್ರಮಣೆ ಸಹಜ)
- ರಾಮೇಶ್ವರಕ್ಕೆ ಹೋದರೂ ಶನೇಶ್ವರ ಬಿಡ (ಆಗಲಿರುವುದು ಆಗಿಯೇ ತೀರುತ್ತದೆ)
- ಹೌದಪ್ಪನ ಚಾವಡಿಯಲ್ಲಿ ಹೌದಪ್ಪ ಅಲ್ಲಪ್ಪನ ಚಾವಡಿಯಲ್ಲಿ ಅಲ್ಲಪ್ಪ




