Channaveera Kanavi
Channaveera Kanavi ಧಾರವಾಡದ ನೆಲದ ಗುಣವೇನೋ ಋಣವೇನೂ ಕವಿಗಾಳಿ ಸುಳಿಗಾಳಿ ತೀಡುತಿಹುದು ಧಾರವಾಡದ ತಾಯ ಮಡಿಲಲ್ಲಿ ಮೊರೆಯಿಟ್ಟ ದತ್ತವಾಣಿಗೆ ಎದೆಯು ಕೊಡುತಿಹುದು ಜನದ ಪರಿಯಂತಿರಲಿ ನೆಲದಾಯಿ ಕಾರುಣ್ಯ ಹಸಿರು ಸಾಮ್ರಾಜ್ಯದಲ್ಲಿ ಕುಸುಮಿಸಿಹುದು ಕಂಡ ಕಣ್ಮನಗಳು ರಸಭಾವ ಸಂಚಾರ ತಿರುವಕ್ಕಳೂ ಕವಿಗಳಾಗಬಹುದು
ಇದು ಕಣವಿಯವರ ‘ಭಾವಜೀವಿ’ ಸಂಕಲನದ ಕವನ. ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಬಿ.ಎ. ಪದವಿಯಲ್ಲಿ ವಿದ್ಯಾರ್ಥಿಯಾದಾಗ ಅವರು ಈ ಕೃತಿಯನ್ನು ಹೊರತಂದಿದ್ದರೆಂಬುದು. ಆಧುನಿಕ ಕನ್ನಡ ಕಾವ್ಯ ಪ್ರಪಂಚದಲ್ಲಿ ಅಗ್ರ ಪಂಕ್ತಿಯಲ್ಲಿ ರಾರಾಜಿಸಬಹುದಾದ ಮತ್ತೊಂದು ಹೆಸರು ಚನ್ನವೀರ ಕಣವಿಯವರದು. ಪ್ರಾಜ್ಞರು ಅಭಿಪ್ರಾಯಪಟ್ಟಂತೆ ಕಣವಿಯವರ ಮನಸ್ಸು ಕೋಮಲವಾದದ್ದು ಪಾರಿಜಾತದಂತೆ, ಹೃದಯ ಮೋಹಕವಾದುದು ಹೂವಿನ ಪರಿಮಳದಂತೆ.
ಅವರ ಪ್ರತಿಭೆ ಅನನ್ಯವಾದದ್ದು. ಅವರ ಕವನಗಳು ಸುಸಂಸ್ಕೃತ ಮನಸ್ಸಿನ ಪ್ರತಿಬಿಂಬಗಳು, ನವೋದಯ, ಪ್ರಗತಿಶೀಲ, ನವ್ಯ, ನವೋತ್ತರ ಕನ್ನಡ ಕಾವ್ಯ ಪರಂಪರೆಯಲ್ಲಿ ಇವರ ಕಾವ್ಯ ಜೀವ ಧ್ವನಿಯಾಗಿ ಹೊರಹೊಮ್ಮಿದೆ. ಇವರ ಕಾವ್ಯಗಂಗೆ ಜೀವ ನದಿಯಾಗಿ ಹರಿದಿದೆ. ಪ್ರೀತಿಯನ್ನೇ ಹಾಸುಹೊದೆದುಕೊಂಡು ಇವರು ನಿಸರ್ಗದ ಬಗೆಗೆ ಮಾನವನ ಬದುಕಿನ ಉತ್ಕರ್ಷದ ಬಗೆಗಿನ ಪ್ರೀತಿ ತುಂಬಿದ ಕಣವಿಯವರ ಕವನಗಳು ಹೃದಯ ಸ್ಪರ್ಶಿಯಾಗಿವೆ.
ಇವರು ಜನಿಸಿದ್ದು ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ಜೂನ್ ೨೮, ೧೯೨೮ರಂದು, ತಾಯಿಯ ತವರೂರಲ್ಲಿ, ತಂದೆ ಸಕ್ಕರಪ್ಪನವರು ಅದೇ ತಾಲೂಕಿನ ಶಿರುಂದದಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ಹೀಗಾಗಿ ಇವರ ಬಾಲ್ಯ ಶಿರುಂದದಲ್ಲಿ ಕಳೆಯಿತು. ಹಳ್ಳಿಯ ಜೀವಂತ ಬದುಕು, ಅವರ ಪರಿಸರ, ಜಾನಪದ ಜೀವನ, ಅವಿಭಕ್ತ ಕುಟುಂಬದ ಸದಸ್ಯರ ಪ್ರೀತಿ ಮುಂತಾದ ಜಾನಪದ ಜೀವನ ಕವಿ ಕಣವಿಯವರ ಮೇಲೆ ಪ್ರಭಾವ ಬೀರಿದವು. ಆ ಸಂದರ್ಭದಲ್ಲಿ ಇವರಿಗೆ ಬಂದಿದ್ದ ಬಿರುದು ‘ಮಾಸ್ತರರ ಮಗ ಬಾಳಶಾಣ್ಯಾ’ ಎಂದು.
ನಂತರ ಧಾರವಾಡದ ಹತ್ತಿರದ ಗರಗದಲ್ಲಿ ಪ್ರಾಥಮಿಕ ಶಾಲೆಗೆ ಸೇರಿದಾಗ ಆಗ ಸ್ವಾತಂತ್ರ್ಯ ಚಳುವಳಿ ಜೊತೆಗೆ ಕರ್ನಾಟಕ ಏಕೀಕರಣದ ಚಳುವಳಿಗಳು ಬಾಲಕನ ಮನಸ್ಸಿನ ಮೇಲೆ ದೇಶಾಭಿಮಾನ, ಕನ್ನಡಾಭಿಮಾನವನ್ನು ಮೂಡಿಸಿದವು. ಮು ಪರೀಕ್ಷೆಯಲ್ಲಿ ಧಾರವಾಡ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದು ಧಾರವಾಡದ ಮುರಘಾಮಠದ ಪ್ರಸಾದ ನಿಲಯದಲ್ಲಿದ್ದುಕೊಂಡು ಆರ್.ಎಲ್.ಎಸ್. ಹೈಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿದರು. ಶಾಲೆಯ ಮ್ಯಾಗಜಿನ್‌ನಲ್ಲಿ ಇವರ ಕವನ ಪ್ರಕಟವಾಯಿತು.
ಧಾರವಾಡದ ಕವಿ ಪರಿಸರ, ವಾತಾವರಣ ಅವರನ್ನು ಬರೆಯ ಹಚ್ಚಿದವು, ಶ್ರೀ, ಕುವೆಂಪು, ಬೇಂದ್ರೆಯವರ ಕವನಗಳು ಕಣವಿಯವರ ಕವಿ ಹೃದಯವನ್ನು ಜಾಗೃತಗೊಳಿಸಿದವು. ತಮ್ಮ ಸಮಾನ ಮನಸ್ಕರ ಒಂದು ಸಂಘಟನೆಯನ್ನು ಮಾಡಿಕೊಂಡರು. ಅದು ‘ಕಾವ್ಯಾನುಭವ ಮಂಟಪ’ ಅದರಲ್ಲಿ ಕೀರ್ತಿನಾಥ ಕುರ್ತಕೋಟಿ, ಶಂಕರ ಮೊಕಾಸಿ ಪುಣೇಕರ್, ಶಿವೇಶ್ವರ ದೊಡ್ಡಮನಿ ಮುಂತಾದ ಸ್ನೇಹಿತರು ಭಾಗಿಯಾದರು. ಇದರಲ್ಲಿ ಸಾಹಿತ್ಯದ ಬಗ್ಗೆ ಚರ್ಚೆ, ಕಾವ್ಯ ವಾಚನವನ್ನು ನಡೆಸಿದರು.
ಸ್ವಾತಂತ್ರೋತ್ಸವದ ಕವಿಗೋಷ್ಠಿಯಲ್ಲಿ ವಾಚಿಸಿದ ಕವನ ‘ಬಂಧದಿಂ ಬಿಡುಗಡೆಗೆ’ ಅನೇಕ ಹಿರಿಯ ಕವಿಗಳ ಮೆಚ್ಚುಗೆಗೆ ಪಾತ್ರವಾಯ್ತು ಬಿ.ಎ. ಪದವಿಯ ಹಾಗೂ ಎಂ.ಎ. ಸ್ನಾತಕೋತ್ತರ ಪದವಿಯಲ್ಲೂ ಪ್ರಥಮ ಸ್ಥಾನ ಪಡೆದರು.
ಸ.ಸ. ಮಾಳವಾಡ ದಂಪತಿಗಳ ಮೂಲಕ ವಿಜಾಪೂರದ ಶಾಂತಾದೇವಿ ಎನ್ನುವರೊಂದಿಗೆ (ಎಸ್. ಗಿಡವರ ಅವರ ಮಗಳು) ವಿವಾಹವಾಯಿತು. ಅವರೂ ಕೂಡ ಮುಂದೆ ಒಳ್ಳೆಯ ಬರಹಗಾರ್ತಿಯಾಗಿ ಹೆಸರಾದರು.
ಮೊದಲಿಗೆ ಕಣವಿಯವರು ಕ.ವಿ.ವಿ. ವ್ಯಾಸಂಗ ವಿಸ್ತರಣ ಹಾಗೂ ಪ್ರಕಟಣೆ ವಿಭಾಗದ ಕಾರ್ಯದರ್ಶಿಯಾಗಿ ನಂತರ, ಪ್ರಸಾರಾಂಗದ ನಿರ್ದೆಶಕರಾಗಿ ಅದ್ವಿತೀಯ ಸಾಧನೆಯನ್ನು ಮಾಡಿದರು. ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಉಪನ್ಯಾಸ ಏರ್ಪಡಿಸಿ ಆ ಕುರಿತು ಎಲ್ಲಾ ವರ್ಗದ ಜನರಿಗೆ ಉಪಯುಕ್ತವಾಗ ಬಹುದಾದಂತಹ ಗ್ರಂಥಗಳನ್ನು ಪ್ರಕಟಿಸಿದರು.
ಕನ್ನಡ ಕಾವ್ಯ ಪರಂಪರೆಯಲ್ಲಿ ಕವಿ ಕಣವಿಯವರಿಗೆ ಮಹತ್ವದ ಸ್ಥಾನವಿದೆ. ಇವರ ಕವನ ಸಂಕಲನಗಳು ಈ ರೀತಿಯಾಗಿವೆ. ‘ಕಾವ್ಯಾಕ್ಷಿ’, ‘ಭಾವಜೀವಿ’ ‘ಆಕಾಶಬುಟ್ಟಿ’, ‘ಮಧುಚಂದ್ರ’, ‘ದೀಪಧಾರಿ’, ‘ಮಣ್ಣಿನ ಮೆರವಣಿಗೆ’, ‘ನೆಲಮುಗಿಲು’, ‘ಎರಡು ದಡ’, ‘ನಗರದಲ್ಲಿ ನೆರಳು’, ‘ಜೀವಧ್ವನಿ’, ‘ಕಾರ್ತಿಕ ಮೋಡ’, ‘ಜೀನಿಯಾ’, ‘ಶಿಶಿರದಲ್ಲಿ ಬಂದ ಸ್ನೇಹಿತ’, ‘ಬರೆದು ತೀರದ ಬದುಕು’, ‘ನೀವೇ ಪ್ರಮಾಣು’.
ಹಾಗೆ ‘ಚಿರಂತರ ದಾಹ’ (ಆಯ್ದ ಕವಿತೆಗಳು), ‘ಹೂವು ಹೊರಳುವವು ಸೂರ್ಯನ ಕಡೆಗೆ’ ಗೇಯ ಕವಿತೆಗಳು, ‘ಹಕ್ಕಿ ಪುಚ್ಚ’ (ಮಕ್ಕಳ ಕವನಗಳು) ಸುನೀತ ಸಂಪದ (ಸುನೀತಗಳ ಕಾವ್ಯಗುಚ್ಛ) “ಮಾನಸಪೂಜೆ” ಆಧ್ಯಾತ್ಮಿಕ ಕವಿತೆಗಳು, ಇಂಗ್ಲೀಷಿಗೆ ಅನುವಾದಗೊಂಡ Living Life ೫೦೦ ಕವನಗಳ ಕಣವಿಯವರ ಸಮಗ್ರ ಕಾವ್ಯ ಹೊರಬಂದಿದೆ. ಕವಿತಾ ರಚನೆಯ ಜೊತೆಗೆ ವಿಮರ್ಶಾ ವಿಭಾಗದಲ್ಲೂ ಇವರು ಸೈ ಎನಿಸಿಕೊಂಡಿದ್ದಾರೆ.
‘ಸಾಹಿತ್ಯ ಚಿಂತನ’, ‘ಕಾವ್ಯಾನುಸಂಧಾನ’, ‘ಸಹಾಮಹಿ’, ‘ಸಮತೋಲನ’, ‘ಮಧುರಚನ್ನ’, ‘ವಚನಾಂತರಂಗ’.
ಇವರಿಗೆ ಸಂದ ಪ್ರಶಸ್ತಿ ಗೌರವಗಳು :
‘ಜೀವಧ್ವನಿ’ ಕವನ ಸಂಕಲನಕ್ಕೆ ೧೯೮೨ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೬೫ರಲ್ಲಿ ಹಾಸನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ.
- ೧೯೯೯ ಕರ್ನಾಟಕ ಸರಕಾರದ ಪಂಪ ಪ್ರಶಸ್ತಿ
- ೨೦೦೨ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನಾಡೋಜ ಪ್ರಶಸ್ತಿ’.
- ೨೦೦೫ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್.
- ೨೦೧೦ರ ಬೇಂದ್ರೆ ಟ್ರಸ್ಟ್‌ನ ಅಂಬಿಕಾತನಯದತ್ತ ಪ್ರಶಸ್ತಿ ಎಲ್ಲಾ ಕಾಲದ ಎಲ್ಲಾ ಮನೋಧರ್ಮದ ಚಿಂತನೆಗಳಿಂದ ಕಾವ್ಯ ರಚಿಸಿದ ಕವಿ ಕಣವಿಯವರು ಕನ್ನಡಿಗರ ಅಭಿಮಾನದ ಕವಿಗಳು,