Kannada Gadegalu
ಕನ್ನಡ ಗಾದೆ ಮಾತು
Kannada Gadegalu ಗಾದೆ ಎಂದರೆ ಎಲ್ಲರಿಗೂ ತಿಳಿದಿರುವ ಮಾತು. ಇದನ್ನು ‘ನಾಣ್ಣುಡಿ’ ಎಂದೂ ಕರೆಯುತ್ತಾರೆ. ‘ಗಾಥಾ’ ಎಂಬ ಪ್ರಾಕೃತ ಪದದ ಅಪಭ್ರಂಶ, ರೂಪವೇ ‘ಗಾದ’, ಗಾದೆ ಒಂದು ನಾಡಿನ ಜನಸಾಮಾನ್ಯರು ನಿತ್ಯ ವ್ಯವಹಾರದಲ್ಲಿ ಸಹಜವಾಗಿ ಬಳಸುವ ರೂಢಿಗತ ಅಲಂಕಾರಿಕ ಮಾತು. ಇದು ಯಾರಿಂದ, ಯಾವಾಗ ಹುಟ್ಟುತ್ತದೋ ಹೇಳಲಾಗದು, ಒಂದು ವಿಶಿಷ್ಟ ಅನುಭವವು ಇಲ್ಲಿ ಸೂತ್ರಪ್ರಾಯ ನುಡಿಗಟ್ಟಿನಲ್ಲಿ ರೂಪುಗೊಳ್ಳುತ್ತದೆ.
ಗಾಥಾ > ಗಾಥೆ >ಗಾದೆ~ ಎಂದರೆ ಎಲ್ಲರಿಗೂ ತಿಳಿದಿರುವ ಮಾತು. ಇದನ್ನು ‘ನಾಣ್ಣುಡಿ’ ಎಂದೂ ಕರೆಯುತ್ತಾರೆ. ‘ಸೂಕ್ತಿ’- ವ್ಯಕ್ತಿಯೊಬ್ಬನ ಹೇಳಿಕೆಯಾದರೆ, ‘ಗಾದೆ’ ಜನಸಮುದಾಯದ ಅನುಭವದ ನುಡಿಯಾಗಿದೆ.
ಗಾದೆಯ ಲಕ್ಷಣಗಳು
- ಸಂಕ್ಷಿಪ್ತವಾಗಿರುತ್ತದೆ. ಅರ್ಥ ಚುರುಕಾಗಿ, ಚುಟುಕಾಗಿರುತ್ತದೆ.
- ಪ್ರಾಸಬದ್ಧ ಅಕ್ಷರಗಳು ಅರ್ಥಪೂರ್ಣವಾಗಿ ಜೋಡಣೆಯಾಗಿರುತ್ತದೆ.
- ಒಂದಲ್ಲ ಒಂದು ಉಪಮೆ ಅಥವಾ ದೃಷ್ಟಾಂತ ಅಡಕವಾಗಿರುತ್ತದೆ.
ಉದಾಃ ಸಂತೆ ಹೊತ್ತಿಗೆ ಮೂರು ಮೊಳ ನೇಯ್ದರು
ಯಾವುದೇ ಕೆಲಸವನ್ನು ಮಾಡಿ ಯಶಸ್ವಿಯಾಗಲು ವ್ಯವಸ್ಥಿತವಾದ ಪೂರ್ವ ಸಿದ್ಧತೆ ಅಗತ್ಯ ಎಂಬ ಸತ್ಯವನ್ನು ಇದು ತಿಳಿಸುತ್ತದೆ. ಸಮಯಪ್ರಜ್ಞೆ, ಪ್ರಾಮಾಣಿಕ ಪ್ರಯತ್ನ ಇಲ್ಲಿ ಮುಖ್ಯ. ಉದಾಹರಣೆಗೆ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಉತ್ತಮ ಅಂಶಗಳನ್ನು ಗಳಿಸಬೇಕಾದರೆ, ಆತ ವರ್ಷದ ಪ್ರಾರಂಭದಿಂದಲೂ ಕ್ರಮಬದ್ಧವಾಗಿ ಅಧ್ಯಯನ ನಡೆಸಬೇಕು. ಆಗ ಮಾತ್ರ ಓದಿದ್ದನ್ನು ಮನನ ಮಾಡಲು ಸಾಧ್ಯವಾಗು ತದೆ. ಪರೀಕ್ಷೆಯಲ್ಲಿ ಯಶಸ್ವಿಯಾಗಲೂ ಸುಲಭವಾಗುತ್ತದೆ. ಹಾಗಿಲ್ಲದೇ ಪರೀಕ್ಷೆ ಸಮೀಪಿಸಿದಾಗ ಮಾತ್ರ ಓದಲು ತೊಡಗಿದ್ದರೆ, ಸಮಯದ ಅಭಾವದಿಂದ ವಿಷಯಗಳು ನೆನಪಿನಲಿ ಗಲಿಬಿಲಿಗೊಳ್ಳುವ ಪ್ರಸಂಗ ಎದುರಾಗುತ್ತದೆ.
ಸಂತೆಗೆ ಹೋಗಿ ವ್ಯಾಪಾರ ಮಾಡಿ ಒಳ್ಳೆಯ ಲಾಭವನ್ನು ಹೊಂದಬೇಕಾದರೆ ಸಾಕಷ್ಟು ಸಮಯವಿರುವಾಗಲೇ ನೂಲನ್ನು ತಂದು ಅಂದವಾದ ವಸ್ತ್ರವನ್ನು ನೇಯ್ದು ತೆಗೆದುಕೊಂಡು ಹೋದರೆ ಎಲ್ಲರ ಗಮನವನ್ನು ಸೆಳೆಯುತ್ತದೆ. ತಕ್ಕ ಬೆಲೆಯೂ ಸಿಕ್ಕುತ್ತದೆ. ಅವಸರದಲ್ಲಿ ಹೊರಡುವಾಗ ನೆಯ್ದು ತೆಗೆದುಕೊಂಡು ಹೋದರೆ ಅದಕ್ಕೆ ಬಂಧ ಬಿರಿಯಿರುವುದಿಲ್ಲ. ಅಂದವೂ ಇರುವುದಿಲ್ಲ. ಕೊನೆಗೆ ಉತ್ತಮ ಬೆಲೆಯೂ ದಕ್ಕುವುದಿಲ್ಲ.
ಅಂದರೆ ಯಾವುದೇ ಕೆಲಸವನ್ನು ಅವಸರದಲ್ಲಿ ಮಾಡಬಾರದು. ಆಗ ಅದು ಬಯಸಿದ ಫಲವನ್ನು ಕೊಡುವುದಿಲ್ಲ ಎಂಬುದು ಈ ಗಾದೆಯ ಸಾರ. ಇದೊಂದು ಪ್ರಸಿದ್ಧವಾದ ಗಾದೆ ಮಾತು.
ಕೆಲವು ಗಾದೆಗಳು:
- ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ?
- ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ.
- ಅಕ್ಕಿ ಮೇಲಾಸೆ ನೆಂಟರ ಮೇಲೆ ಪ್ರೀತಿ,
- ಅಡಿಕೇಲಿ ಹೋದ ಮಾನ ಆನೆ ಕೊಟ್ಟರೂ ಬಾರದು.
- ಅಲ್ಪರ ಸಂಗ ಅಭಿಮಾನ ಭಂಗ,
- ಆಕಳು ಕಪ್ಪಾದ್ರೆ, ಹಾಲು ಕಪ್ಪೆ ?
- ಆಯ ನೋಡಿ ಪಾಯ ಹಾಕು.
- ಅಳಾಗಬಲ್ಲವನು ಅರಸಾಗಬಲ್ಲ
- ಇಬ್ಬರ ಜಗಳ ಮೂರನೆಯವನಿಗೆ ಲಾಭ
- ಇಲ್ಲದವನಿಗೆ ಒಂದು ಚಿಂತೆ, ಇದ್ದವನಿಗೆ ನೂರು ಚಿಂತೆ
- ಉಗುರಿನಿಂದ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡಂತೆ.
- ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ.
- ಎತ್ತು ಏರಿಗೆ ಎಳೆದ್ರೆ, ಕೋಣ ನೀರಿಗೆ ಎಳೀತು.
- ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ದೊಣ್ಣೆ ಪೆಟ್ಟು.
- ಹತ್ತು ಕಟ್ಟೋ ಕಡೆ ಒಂದು ಮುತ್ತು ಕಟ್ಟು
- ತುಂಬಿದ ಕೊಡ ತುಳುಕೋದಿಲ್ಲ.
- ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ.
- ಮನೆಗೆ ಮಾರಿ ಪರರಿಗೆ ಉಪಕಾರಿ.
- ಹಲ್ಲು ಇದ್ದವನಿಗೆ ಕಡಲೆ ಇಲ್ಲ, ಕಡಲೆ ಇದ್ದವನಿಗೆ ಹಲ್ಲು ಇಲ್ಲ.
- ಹಣ ಅಂದರೆ ಹೆಣಾನು ಬಾಯ್ ಬಿಡುತ್ತೆ
ಕೆಲವು ಗಾದೆ ಮಾತುಗಳನ್ನು ವಿಸ್ತೃತ ರೂಪದಲ್ಲಿ ಬರೆಯಲಾಗಿದೆ
1. ಊಟ ಬಲ್ಲವನಿಗೆ ರೋಗವಿಲ್ಲ. ಮಾತು ಬಲ್ಲವನಿಗೆ ಜಗಳವಿಲ್ಲ
ಉತ್ತರ : ಗಾದೆ, ನಾಣ್ಣುಡಿ, ಲೋಕೋಕ್ತಿ, ಸೂಕ್ತಿ, ಸುಭಾಷಿತ ಇವೆಲ್ಲವೂ ಪರ್ಯಾಯ ಪದಗಳು, ಇವು ಚೊಕ್ಕವೂ ಅರ್ಥಗರ್ಭಿತವೂ, ಗಂಭೀರವೂ, ತ್ರಿಕಾಲಾಬಾಧಿತವಾದ ಸ್ವಾತಂತ್ರ್ಯವೂ ಆದ ಸ್ಪಷ್ಟ ಅಭಿಪ್ರಾಯಗಳಾಗಿವೆ. ಮಾನವ ಜೀವಿತದ ಅನುಭವಗಳ ಮಥಿತದ ನವನೀತಗಳು. ಊಟ ಜೀವರಾಶಿಗಳಿಗೆ ಜೀವನಾಧಾರ. ಊಟವಿಲ್ಲದ ಬದುಕು ಬದುಕೆ? ಊಟ ಪರಮಾತ್ಮ ನೀಡಿರುವ ಪ್ರಸಾದ, ಭಕ್ತಿ, ಶೃದ್ದೆ, ಶುಚಿತ್ವ ಮತ್ತು ಆರೋಗ್ಯಗಳ ಹಿನ್ನೆಲೆಯನ್ನೊಳಗೊಂಡಿರುವ ಪವಿತ್ರ ಚವಸ್ತು ಊಟ ಹಸಿವನ್ನು ನಿವಾರಿಸುವ ದಿವ್ಯೌಷಧ.
ಶರೀರಕ್ಕೆ ಶಕ್ತಿ, ಪುಷ್ಟಿ, ತುಷ್ಟಿಗಳನ್ನು ನೀಡುವುದು ಊಟ, ಅದನ್ನು ಹಿತ ವಾಗಿ, ಮಿತವಾಗಿ ಸಮಯಕ್ಕೆ ಸರಿಯಾಗಿ ತೆಗೆದುಕೊಂಡರೆ ಉತ್ತಮ ಆರೋಗ್ಯ ವರ್ಧಕ, ಇಲ್ಲದಿದ್ದರೆ ಅದಕ್ಕೆ ಅನೇಕ ತೊಂದರೆಗಳಿಗೆ ಕಾರಣವಾಗುತ್ತದೆ. ರೋಗ, ರುಜಿನಗಳಿಗೆ ಎಡೆಮಾಡಿಕೊಡುತ್ತದೆ. ರುಚಿಯಾಗಿದೆ ಎಂದು ಒಂದೇ ವಿಧವಾದ ಊಟವನ್ನು ಹೆಚ್ಚು ಸೇವಿಸುವುದಾಗಲಿ ರುಚಿಸಲಿಲ್ಲ ಎಂದು ವರ್ಜಿಸುವುದಾಗಲಿ ತಪ್ಪು.
ಉಂಡ ಊಟ ಸರಿಯಾಗಿ ಪಚನವಾಗಬೇಕು. ಅದು ರಕ್ತಗತವಾಗಬೇಕು. ಆಗಲೇ ಶುದ್ಧ ಆರೋಗ್ಯ ಇದನ್ನು ಬಲ್ಲವ ಉತ್ತಮ ಬದುಕು ನಡೆಸಬಲ್ಲ. ಈ ಬಗ್ಗೆ ಎಷ್ಟು ಉಣ್ಣಬೇಕು? ಎಂಬ ಪ್ರಶ್ನೆ ಬರುತ್ತದೆ. ಅದಕ್ಕೂ ಹಲವು ಅಭಿಪ್ರಾಯಗಳಿವೆ. ‘ಒಪ್ಪತ್ತುಂಡುವ ಯೋಗಿ, ಎರಡೊತ್ತುಂಡವ ಭೋಗಿ, ಮೂರೊತ್ತುಂಡವ ರೋಗಿ, ನಾಲೊತ್ತುಂಡವನನ್ನು ಹೊತ್ತುಕೊಂಡು ಹೋಗಿ, ಎರಡು ಹೊತ್ತು ಊಟ ಮಾಡುವುದರಿಂದ ಶುದ್ಧ ಆರೋಗ್ಯ ಹೊಂದಬಹುದು.
ಮಾತು- ಇದು ಮತ್ತೊಂದು ಬದುಕಿನ ಅವಶ್ಯಕ ವಿಷಯ. ಮಾತಿಲ್ಲದವನ ಬದುಕಿನಿಂದ ಹಿಡಿದು ಮಾತನ್ನು ಸಮರ್ಪಕವಾಗಿ ವೈಜ್ಞಾನಿಕವಾಗಿ ಬಳಸುವ
ಭಾಷಾಶಾಸ್ತ್ರಜ್ಞರವರೆಗೂ ಮಾತಿನ ಮಹತ್ವ ಅರಿತಿರಬೇಕು. ಮಾತಿನ ಬಗ್ಗೆ ಹೇಳಿರುವ ಮಾತುಗಳು ಒಂದಲ್ಲ ಎರಡಲ್ಲ ನೂರಾರು, ಮಾತು ಬೆಳ್ಳಿ, ಮಾತು ಬಲ್ಲವ ಮಾಣಿಕ್ಯ ತಂದ, ಮೃದುವಚನ ಮುಲೋಕ ಗೆಲ್ಲುವುದು, ನಾಲಗೆ ಒಳ್ಳೆಯದಾದರೆ ಊರು ಒಳ್ಳೆಯದು ಎಂಬ ಹಲವು ಹತ್ತು ಮಾತುಗಳಿಗೆ ವ್ಯಾಖ್ಯಾನ ಅನಗತ್ಯ. ಮಾತು ಹೇಗಿರಬೇಕು? ಗಡುಸಾದರೆ ಏನೇನು ಅನಾಹುತ ಕಾದಿರುತ್ತದೆ? ಶುದ್ಧವಾಗಿದ್ದರೆ, ಯಾವ ಯಾವ ಕಾರ್ಯ ಸಾಧಿಸಬಹುದು? ಎಂಬೆಲ್ಲ ವಿಷಯಗಳನ್ನು ಅರಿತಿರಬೇಕು.
ಮನೆಯಲ್ಲಿನ ಸದಸ್ಯರೊಂದಿಗೆ ಆಡುವ ಮಾತುಗಳು ಸಮಾಜದಲ್ಲಿ ಸಭೆ ಸಮಾರಂಭಗಳಲ್ಲಿ ಮಾತನಾಡಲಾಗದು. ಗೆಳೆಯರೊಂದಿಗೆ ಆಡುವ ಮಾತುಗಳು ಬೇರೆ ರೀತಿಯದೇ ಆಗಿರುತ್ತದೆ. ಯಾರಲ್ಲಿ ಹೇಗೆ ಮಾತನಾಡಬೇಕು ಎಂಬ ಕಡಿವಾಣ ಮನಸ್ಸಿನಲ್ಲಿದ್ದರೆ ಮಾತಿನಿಂದ ಆಗಬಹುದಾದ ಅನರ್ಥಗಳನ್ನು ದೂರ ಮಾಡಬಹುದು.
ಮಾತು ಮತ್ತೊಬ್ಬರ ಮನಸ್ಸಿನ ಮೇಲೆ ಸತ್ಪರಿಣಾಮವನ್ನೂ, ದುಷ್ಪರಿಣಾಮ ಗಳನ್ನು ಮಾಡುವ ಸಾಮರ್ಥ್ಯ ಹೊಂದಿದೆ. ಅದನ್ನು ತಿಳಿದು ಸತ್ಪರಿಣಾಮವನ್ನುಂಟು ಮಾಡುವ ಮಾತುಗಳನ್ನು ಬಳಸುವುದು ಸೂಕ್ತ ಜಗಳದಿಂದ ಮುಕ್ತ
2. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ?
ಮುಖ ನೋಡಿಕೊಳ್ಳಲು ಕನ್ನಡಿ ಬೇಕು. ಹಾಗೆಯೇ ಅಂಗೈ ನೋಡಿಕೊಳ್ಳಲು ಕನ್ನಡಿಯ ಅವಶ್ಯಕತೆ ಇರದು. ಏಕೆಂದರೆ, ಅಂಗೈಯನ್ನು ನೇರವಾಗಿ ನೋಡಬಹುದು. ಅದರಲ್ಲಿನ ಹುಣ್ಣು ಮತ್ತಿತರ (ಕಲೆ) ದೋಷಗಳನ್ನು ಸ್ಪಷ್ಟವಾಗಿ ಅರಿತುಕೊಳ್ಳಬಹುದು. ಅದೇ ತೆರನಾಗಿ ನಾವು ಮಾಡುವ ಕಾರ್ಯ ಅಥವಾ ಆಡುವ ಮಾತು ತಪ್ಪಾಗಿರುವಂಥದ್ದು. ನಾವು ಹಿಡಿದಿರುವ ದಾರಿ ಸರಿಯಾದುದು ಅಲ್ಲಿ ಎಂಭಂಥ ಕೆಲವು ಸಂಗತಿಗಳು ನಮಗೆ ಸ್ಪಷ್ಟವಾಗಿ ಗೊತ್ತಿರುತ್ತವೆ. ಆದರೂ ತಪ್ಪು ಕಾರ್ಯ ಮಾಡುತ್ತೇವೆ.
ನಮ್ಮ ದೋಷಗಳು ನಮಗೆ ಸ್ಪಷ್ಟವಾಗಿ ಅನುಭವಕ್ಕೆ ಬರುತ್ತಿರುವಾಗ ಬೇರೊಬ್ಬರೂ ನಮ್ಮ ತಪ್ಪನ್ನು ಅಥವಾ ದೋಷವನ್ನು ಗುರುತಿಸಿ, ನಮಗೆ ತೋರಿಸುವ ಅಗತ್ಯತೆ ಇರದು. ಮುಖದ ಮೇಲಿರುವ ಕಪ್ಪು ಚುಕ್ಕ ಮೋಡವೆ ಮುಂತಾದದವುಗಳನ್ನು ಕನ್ನಡಿಯ ಸಹಾಯದಿಂದ ಗುರುತಿಸಿ ಕೊಂಡು ಅವುಗಳ ನಿವಾರಣೆಗೆ ಪ್ರಯತ್ನ ಮಾಡಲು ಕನ್ನಡಿಯು ಸಹಕಾರಿಯಾಗುತ್ತದೆ. ಅಂಗೈನಲ್ಲಿರುವ ಹುಣ್ಣನ್ನು ನೋಡಿಕೊಳ್ಳಲು ಕನ್ನಡಿಯ ಅಗತ್ಯತೆ ಇಲ್ಲ. ಅಂತೆಯೇ ನಮ್ಮ ದೋಷಗಳು ನಮಗೆ ಗೊತ್ತಾಗುತ್ತಿರುವಾಗ ಪರರ ಸಹಾಯಬೇಕಾಗಿಲ್ಲ. ಅದುದರಿಂದ ಅ೦ಗೈ ಹುಣ್ಣಿಗೆ ಕನ್ನಡಿ ಏಕೆ? ಎಂಬ ಮಾತು ಜನಜನಿತವಾಗಿದೆ.
3. ತುಂಬಿದ ಕೊಡ ತುಳುಕುವುದಿಲ್ಲ
ತುಂಬಿದ ಕೊಡದಲ್ಲಿನ ನೀರಿಗೆ ಅಲುಗಾಟವಿರದು. ಶಬ್ದವೂ ಹೊರಡದು. ಹೊತ್ತು ಸಾಗುವವನ ಚಲನೆಗೂ ಆತಂಕ ತರಲಾರದು. ಅರ್ಧ ಕೊಡವು ಅಲುಗಾಡುತ್ತದೆ. ಶಬ್ದವನ್ನುಂಟು ಮಾಡುತ್ತದೆ. ಹೊತ್ತು ಸಾಗುವವನ ಚಲನೆಗೆ ಆತಂಕವನ್ನುಂಟು ಮಾಡುತ್ತದೆ. ಇದು ಸರ್ವರಿಗೂ ಅನುಭವವಿರುವ ಮಾತು. ಈ ತುಂಬಿದ ಕೊಡಕ್ಕೆ ಜ್ಞಾನಿಯನ್ನು ಹೋಲಿಸಲಾಗಿದೆ. ಜ್ಞಾನಿಯಲ್ಲಿ ಅಲ್ಪತನವಿರದು. ಅವನಲ್ಲಿ ವಿಶಾಲ ಭಾವನೆ ಇರುತ್ತದೆ. ಅವನ ನಡೆ, ನುಡಿಗಳಲ್ಲಿ ಆಚಾರ, ವಿಚಾರಗಳಲ್ಲಿ ಸಮರಸತೆ ಕಂಡು ಬರುತ್ತದೆ. ತಾನು ಜ್ಞಾನಿಯಾಗಿರುವೆನೆಂದು ಪರರ ಎದುರಿನಲ್ಲಿ ಸ್ವಪ್ರಶಂಸೆ ಮಾಡಿಕೊಳ್ಳುವುದಿಲ್ಲ.
ತನ್ನ ಜ್ಞಾನದ ಬಗ್ಗೆ ಹಿರಿತನದ ಬಗ್ಗೆ ಅಹಂಕಾರ ತುಂಬಿರದು. ಕಪಟ, ಅಸತ್ಯಾದಿ ದುರ್ಗುಣಗಳಿಲ್ಲದ ಸದ್ಗುಣವಂತ ಆಗಿರುತ್ತಾನೆ. ಅದೇ ರೀತಿಯಾಗಿ ಇದಕ್ಕೆ ವಿರುದ್ಧವಾದ ರೀತಿಯಲ್ಲಿ ಅಜ್ಞಾನಿಗಳು ಕಂಡು ಬರುತ್ತಾರೆ. ಅವರು ಅರ್ಧ ತುಂಬಿದ ಕೊಡದ ರೀತಿಯಲ್ಲಿ ವರ್ತಿಸುತ್ತಾರೆ. ಜ್ಞಾನ ಬಲ ಉಳ್ಳವನೆಂದು ತೋರಿಸಿಕೊಳ್ಳಲು ಮಾತು ಮತ್ತು ಕೃತಿಗಳಿಂದ ವ್ಯಕ್ತಪಡಿಸುತ್ತಾರೆ. ಪದೇ ಪದೇ ತನ್ನನ್ನು ತಾನು ಹೊಗಳಿಕೊಳ್ಳುತ್ತಾರೆ. ವಿವಾದದ ವ್ಯಕ್ತಿಯಾಗಿರುತ್ತಾರೆ ಎಂಬುವುದೆಲ್ಲವನ್ನೂ ಒಂದೇ ಮಾತಿನಲ್ಲಿ ತುಂಬಿದ ಕೊಡ ತುಳುಕದು’ ಎಂಬುದು ಅರ್ಥಪೂರ್ಣವಾಗಿ ವಿವರಿಸುತ್ತದೆ.
4. ಅಳಾಗಬಲ್ಲವನು ಅರಸನಾಗಬಲ್ಲ
ಆಳು ಎಂದರೆ ಸೇವಕನೆಂದೂ, ಅರಸ ಎಂದರೆ ಒಡೆಯನೆಂದೂ ಅರ್ಥ. ಇವರಿಬ್ಬರ ನಡುವಿನ ಅಂತರವೂ ಬಹಳವಿದೆ ನಿಜ. ಯಾವ ವ್ಯಕ್ತಿಯು ತನ್ನ ಕರ್ತವ್ಯ ಎನೆಂಬುದನ್ನು ಅರಿತು ಅದನ್ನು ಸರಿಯಾಗಿ ನೆರವೇರಿಸಬಲ್ಲರೋ ಅವನು ನಿಜವಾದ ಆಳು. ಈ ಆಳು ನಿತ್ಯವೂ ತನ್ನ ಕೆಲಸದಲ್ಲಿ ಅಮಭವವನ್ನು ಪಡೆಯುತ್ತ ಹೋಗುವನು. ಆ ಅನುಭವವು ಅವನಿಗೆ ಶೃದ್ಧೆ, ಪರಿಶ್ರಮ, ಚುರುಕುತನ ನೀಡುತ್ತವೆ. ಯೋಗ್ಯ, ಅಯೋಗ್ಯ, ಲಾಭ-ಹಾನಿ ಮುಂತಾದವುಗಳನ್ನು ನಿರ್ದಿಷ್ಟವಾಗಿ ತಿಳಿಯಬಲ್ಲ ಬೌದ್ಧಿಕ ಸಾಮರ್ಥ್ಯಗಳನ್ನು ನೀಡುತ್ತದೆ. ಇವೆಲ್ಲವೂ ಅವನಿಗೆ ಸ್ವಪರಿಶ್ರಮ ಫಲವಾಗಿ ದೊರೆತವುಗಳು ಆಗಿವೆ.
ಈ ಎಲ್ಲ ಅನುಭವಗಳ ಆಧಾರದ ಮೇಲೆ ಮುಂದೊಂದು ದಿನ ಆತ ತಾನೇ ಒಡೆಯನಾಗಿ ಹಲವಾರು ಕೆಲಸಗಾರರಿಗೆ ಕೆಲಸ ನೀಡುವುದರ ಜೊತೆಗೆ, ಒಳ್ಳೆಯ ಉತ್ಪಾದನೆಯನ್ನು ಮನಾಡಬಲ್ಲ, ಇದೇ ರೀತಿಯಾಗಿ ಯಾವ ವ್ಯಕ್ತಿ ಆಳಾಗಿ ದುಡಿಯಬಲ್ಲನೋ, ಅವನೇ ಅರಸನಂತೆ ಉಣ್ಣುವ ಭಾಗ್ಯವನ್ನು ಹೊಂದಬಲ್ಲನೆಂದು ಹೇಳುತ್ತದೆ.
5.ಅಲ್ಪರಸಂಗ ಅಭಿಮಾನ ಭಂಗ
ಈ ಗಾದೆ ಮಾತಿಗೆ ವಿಶಾಲವಾದ ಅರ್ಥವಿದೆ. ‘ಸಜ್ಜನರ ಸಂಗವು ಹೆಚ್ಚೇನು ಸವಿದಂತೆ’ ಆದರೆ, ಅಲ್ಪರ ಸಂಗವು ಅಭಿಮಾನದ ಹಾನಿಗೆ ಕಾರಣವಾಗುತ್ತದೆ. ಇಲ್ಲಿ ಅಲ್ಪ ಎಂದರೆ, ಅಜ್ಞಾನಿ ಎಂದು ಅರ್ಥವಾಗುತ್ತದೆ. ಅಜ್ಞಾನಿಗೆ ಸಾರಾಸಾರವಾಗಿ ವಿವೇಚಿಸುವ ಸಾಮರ್ಥ್ಯ ಇರುವುದಿಲ್ಲ. ಬದುಕಿನ ಬಗ್ಗೆಯಾಗಲೀ, ಭವಿಷ್ಯತ್ತಿನ ಬಗ್ಗೆಯಾಗಲೀ, ಅವನಿಗೆ ಚಿಂತೆ ಇರದು. ದೇವರು ಅವನಿಗೆ ನೀಡಿದ ಶಕ್ತಿ ಸಾಮರ್ಥ್ಯ, ಬುದ್ಧಿ ವಿವೇಕಗಳನ್ನು ಬಳಕೆ ಮಾಡಿಕೊಳ್ಳುವುದಿಲ್ಲ.
ಇದರಿಂದಾಗಿ ಸಹಜವಾಗಿಯೇ ಅಜ್ಞಾನಿಗಳು ಸಮಾಜದ ಅನಾದರಕ್ಕೆ ಗುರಿಯಾಗಿರುತ್ತಾರೆ. ಇಂಥ ಅಲ್ಪರ ಜೊತೆಗೆ ನಾವು ಸ್ನೇಹವನ್ನು ಬೆಳೆಸಿಕೊಂಡು ಬಂದಿದ್ದಾರೆ, ನಮ್ಮಲ್ಲಿ ಎಷ್ಟೇ ಒಳ್ಳೆಯ ಗುಣಗಳಿದ್ದರೂ ನಾವು ಸಹ ಸಮಾಜದ ಅನಾದರಕ್ಕೆ ಗುರಿಯಾಗಬೇಕಾಗುತ್ತದೆ. ನಮ್ಮ ಮಾನ, ಮರ್ಯಾದೆಗಳು ಹಾಳಾಗಿ ಬಿಡುತ್ತವೆ. ಅಂತೆಯೇ ದಾಸ ಶ್ರೇಷ್ಠರೊಬ್ಬರು ‘ಅಜ್ಞಾನಿಗಳ ಸ್ನೇಹಕ್ಕಿಂತ ಸುಜ್ಞಾನಿಗಳೊಡನೆ ಜಗಳಲೇಸು” ಎಂದು ತಮ್ಮ ಪದ್ಯ ಒಂದರಲ್ಲಿ ಹಾಡಿರುವರು.
6.ಕಾಯಕವೇ ಕೈಲಾಸ
ಉತ್ತರ : ಗಾದೆಯು ಸಾಹಿತ್ಯ ಪ್ರಕಾರಗಳಲ್ಲಿ ಅತ್ಯಂತ ಶಕ್ತಿ ಯುತವಾದ ವಾಕ್ಯರೂಪದ ಸೂಕ್ತಿ, ನುಡಿಗಟ್ಟು ಅಥವಾ ಮಾತಾಗಿದೆ. ಗಾದೆಯು ಅನುಭವಿಗಳ ಚಿಂತನ, ಮಂಥನಗಳ ನವನೀತವಾಗಿದೆ. ವೇದ ಸುಳ್ಳಾಗಬಹುದಾದರೂ ಗಾದೆಯು ಸುಳ್ಳಾಗುವುದಿಲ್ಲ ಎಂಬುದು ಈ ಮಾತಿಗೆ ಪರ್ಯಾಯ
ಉದ್ಯೋಗಂ ಪುರುಷ ಲಕ್ಷಣಂ’ ಎನ್ನುತ್ತದೆ ಒಂದು ಸೂಕ್ತಿ ಈ ಉದ್ಯೋಗವು ದಕ್ಷತೆ, ನಿಷ್ಠೆ, ಪ್ರಾಮಾಣಿಕತೆ ಮತ್ತು ಉಪಯುಕ್ತತೆಗಳನ್ನು ಅವಲಂಬಿಸಿರುತ್ತದೆ. ಆಗ ಆ ಕೆಲಸಕ್ಕೆ ಒಂದು ಸಾರ್ಥಕತೆ ದೊರಕುತ್ತದೆ. ಭಗವಂತನ ಅಜ್ಞಾನುಸಾರವಾಗಿ ಭೂಮಿಗೆ ಬಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಒಂದು ಉದ್ಯೋಗ ಅಥವಾ ಕಾಯಕವನ್ನು ನೆರವೇರಿಸುತ್ತಾ ಆ ಕಾಯಕದಿಂದ ತನ್ನ ಬದುಕನ್ನು ನಡೆಸುತ್ತಾ ಇತರರಿಗೆ ಆ ಕಾಯಕವು ಉಪಯುಕ್ತವಾಗುವಂತೆ ನೋಡಿಕೊಳ್ಳುತ್ತಾ ಹೋಗುವುದೇ ಕಾಯಕದ ಮಹತ್ವ, ತನ್ನ ಕಾಯಕವನ್ನು ನಡೆಸುವಾಗ ಶೃದ್ಧೆ, ಭಕ್ತಿ ಮತ್ತು ವಿಶ್ವಾಸಗಳಿಂದ ಕೂಡಿದ ಮನೋಭಾವನೆಯನ್ನು ಹೊಂದಿದ ವ್ಯಕ್ತಿಯು ಕೈ ಸಾಲದಲ್ಲಿರುವಂತೆ ಆತ್ಮತೃಪ್ತಿಯನ್ನು ಹೊಂದುತ್ತಾನೆ. ಅದು ಸಾರ್ಥಕ ಬದುಕೂ ಆಗುತ್ತದೆ.
ಈ ಸಿದ್ಧಾಂತವನ್ನು ಜನಜನಿತಗೊಳಿಸಿದ ವ್ಯಕ್ತಿ ವಿಶ್ವ ಮಾನವತಾವಾದಿ, ಶರಣ ಸಾಹಿತ್ಯ ಸಾಮ್ರಾಟ, ವಚನ ಸಾಹಿತ್ಯ ಶಿಖಾಮಣಿ ಆದ ಭಕ್ತಿ ಭಂಡಾರಿ ಬಸವಣ್ಣನವರು.