Puttaraj Gawai

Puttaraj Gawai ತ್ರಿಭಾಷಾ ಪಂಡಿತ, ಉಭಯ ಗಾಯನ ವಿಶಾರದ, ಶಿವಯೋಗಿ ಮುಂತಾದ ಅನೇಕ ಅನ್ವರ್ಥಕ, ಸಾರ್ಥಕ ನಾಮಧೇಯಗಳಿಂದ ಅಬಾಲ ವೃದ್ಧರಾದಿಯಾಗಿ ನಿದ್ದೆಯ ಮಂಪರಿನಲ್ಲಿ ಹೇಳಬಹುದಾದ ಹೆಸರಿದು, ನಡೆದಾಡುವ, ಮಾತನಾಡುವ ದೇವರಾಗಿ ಸಾವಿರಾರು ಅಂಧ ಮಕ್ಕಳ ಬಾಳ ನಂದಾದೀವಿಗೆಯಾದವರು

<yoastmark class=

ಡಾ. ಪುಟ್ಟರಾಜ ಕವಿ ಗವಾಯಿಗಳವರು. ಹಾವೇರಿ ಜಿಲ್ಲೆ ಹಾನಗಲ್‌ ತಾಲೂಕಿನ ದೇವರ ಹೊಸಪೇಟೆಯ ರೇವಣ ಸಿದ್ಧಯ್ಯ, ಸಿದ್ಧಮ್ಮನವರ ಪುಣ್ಯದ ಫಲವಾಗಿ ಸಿದ್ಧಮ್ಮನವರ ತವರೂರಾದ ದೇವಗಿರಿಯಲ್ಲಿ ೩-೩-೧೯೧೪ರಂದು ಜನಿಸಿದರು.

ಎರಡು ವರುಷದವರಿರುವಾಗ ತಂದೆಯನ್ನು ಕಳೆದುಕೊಂಡು ಆರು ತಿಂಗಳ ಕೂಸಿದ್ದಾಗ ಕಣ್ಣು ಬೇನೆಗೆ ತೊನಸಿಹುಳ ಲೇಪಿಸಿರೆಂದು ಹೇಳಿದ ಮಾತು ನಂಬಿದ ಸಿದ್ಧಮ್ಮ ಹುಳು ಲೇಪಿಸಿ ಕಂದನ ಕಣ್ಣನ್ನು ಕಳೆದರು. ೧೯೨೨ರಲ್ಲಿ ಪಂಚಾಕ್ಷರ ಗವಾಯಿಗಳವರಲ್ಲಿ ಸಂಗೀತಾಭ್ಯಾಸಕ್ಕಾಗಿ ಸೋದರಮಾವನ ನೆರವಿಂದ ಬಂದರು.

ಸಂಗೀತದ ಜೊತೆಗೆ ಸಂಸ್ಕೃತ, ಹಿಂದಿ, ಕನ್ನಡ, ಛಂದಸ್ಸು, ಕೀರ್ತನೆ, ಬ್ರೇಲ್ ಲಿಪಿಯನ್ನು ಕಲಿತರು. ತಮ್ಮ ಜೀವನವನ್ನು ಗುರು ಸೇವೆಗಾಗಿ ಮುಡಿಪಿಟ್ಟರು. ೧೯೪೫ರಲ್ಲಿ ಪಂಚಾಕ್ಷರ ಗವಾಯಿಗಳು ಲಿಂಗೈಕ್ಯರಾಗಲು ಪುಟ್ಟರಾಜರಿಗೆ ಮೂವತ್ತನೆಯ ವಯಸ್ಸಿನಲ್ಲಿ ವೀರೇಶ್ವರ ಪುಣ್ಯಾಶ್ರಮದ ಹಿರಿಭಾರದ ಹೊರೆಯನ್ನು ಹೆಗಲಿಗೇರಿಸಿದರು. ಬಸರಿಗಿಡದ ವೀರಪ್ಪನವರು ಭೂಮಿಯನ್ನು ದಾನ ಮಾಡಿದ್ದರಷ್ಟೆ, ಆದರೆ ಆಶ್ರಮದ ನಿರ್ಮಾಣ ಕೂಡ ಸುಲಭ ಸಾಧುವಾಗಿರಲಿಲ್ಲ.

ತಾವು ಐಕ್ಯರಾಗುವ ಮುನ್ನ ಆಶ್ರಮದ ಉತ್ತರಾಧಿಕಾರಿಗಳೆಂದು ಆರಿಸಿದ್ದು ಪುಟ್ಟರಾಜರನ್ನು. ಆರ್ಥಿಕ ಸ್ಥಿತಿ ಸುಧಾರಣೆಗಾಗಿ ನಾಟಕ ಕಂಪೆನಿ ಸ್ಥಾಪಿಸಿದರು, ‘ಶಿವಯೋಗಿ ಸಿದ್ದರಾಮ’ ನಾಟಕ ರಚಿಸಿ ನರಗುಂದದಲ್ಲಿ ಪ್ರದರ್ಶಿಸಿದರು. ಸ್ತ್ರೀಪಾತ್ರಗಳನ್ನು ಇರುಷರೇ ಮಾಡಿ ಪ್ರತಿಭೆ ಮೆರೆಯಲು ಅವಕಾಶ ಕಲ್ಪಿಸಿದರು. ನಾಟಕ ಕಂಪನಿ ಇಡಿನಾದ್ಯಂತ ಸಂಚರಿಸಿ ಹೆಸರು, ಹಣ ಎರಡನ್ನೂ ತಂದಿತು.

ರಂಗದಿಗ್ಗಜರಾದ ಹಂದಿಗನೂರು ಸಿದ್ಧರಾಮಪ್ಪ, ನಲವಡಿ ಶ್ರೀಕಂಠ ಶಾಸ್ತ್ರಿಗಳು, ಕಂದಗಲ್‌ ಹನ್ಮಂತರಾಯರು, ಗರುಡ ಸದಾಶಿವರಾಯರು, ಪುಟ್ಟರಾಜ ಗವಾಯಿಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಸದಾಖಾದಿ ಉಡುಗೆಯನ್ನು ಇಷ್ಟಪಡುತ್ತಿದ್ದ ಶ್ರೀಗಳು. ಹಲವಾರು ಸಂಗೀತ ವಾದ್ಯಗಳನ್ನು ಶಾಸ್ತ್ರೀಯವಾಗಿ ನುಡಿಸುತ್ತಿದ್ದರು. ಹಾರ್ಮೋನಿಯಂ ವಾದನದಲ್ಲಂತೂ ಅವರಿಗೆ ಅವರೇ ಸಾಟಿ.

ಪುಟ್ಟರಾಜ ರಚಿಸಿದ ಕೃತಿಗಳು :

ಕಲ್ಬುರ್ಗಿ ಶ್ರೀ ಶರಣಬಸವೇಶ್ವರ ಪುರಾಣ, ಶ್ರೀ ಶಿವಲಿಂಗೇಶ್ವರ ಪುರಾಣ, ಅಂಕಲಗಿ ಅಡವಿಸಿದ್ಧೇಶ್ವರ ಪುರಾಣ, ಕಲಕೇರಿ ಗುರುಮಹಿಮಾ ಪುರಾಣದವರೆಗೆ ೧೮ ಪುರಾಣಗಳು, ಹಿಂದಿಯಲ್ಲಿ ಶ್ರೀ ಸಿದ್ಧಾಂತ ಶಿಖಾಮಣಿ, ಶ್ರೀ ಬಸವೇಶ್ವರ ಪುರಾಣ, ಶ್ರೀ ಸಿದ್ಧಲಿಂಗವಿಜಯ ಪುರಾಣ, ಹಿಂದಿಯಲ್ಲಿ ೨ ಜೀವನ ಚರಿತ್ರೆ, ಸಂಸ್ಕೃತದಲ್ಲಿ ೬ ಕೃತಿಗಳು, ಭಾವಗೀತೆ, ವಚನ ಸಂಕಲನ, ಸಂಗೀತದ ಕುರಿತಾಗಿ ಬರೆದ ಕೃತಿಗಳು ಹಾಗೂ ನಾಟಕಗಳು ನೆಲ್ಲೂರ ನಂಬೆಕ್ಕ ಶಿವಶರಣ ಚನ್ನಯ್ಯ, ಶ್ರೀ ಭಗವಾನ್ ಬಸವೇಶ್ವರ, ಶ್ರೀಕೃಷ್ಣ ಗಾರುಡಿ, ಗೂಷ್ಮಾದೇವಿಯವರೆಗೆ ೨೧ ನಾಟಕಗಳು.

ಡಾ. ಪುಟ್ಟರಾಜ ಗವಾಯಿಗಳವರಿಗೆ ಸಂದ ಗೌರವಗಳು :

  • ಪದ್ಮವಿಭೂಷಣ (೨೦೧೦),
  • ಕೇಂದ್ರ ಸಾಹಿತ್ಯ ನಾಟಕ ಅಕಾಡೆಮಿ ಪ್ರಶಸ್ತಿ (೧೯೯೯)
  • ಮಧ್ಯ ಪ್ರದೇಶದ ಕಾಳಿದಾಸ ಸಮ್ಮಾನ (೨೦೦೭)
  • ಕರ್ನಾಟಕ ವಿ.ವಿ. ಗೌರವ ಡಾಕ್ಟರೇಟ್ (೧೯೭೫)
  • ಕನಕಪುರಂದರ ಪ್ರಶಸ್ತಿ (೧೯೯೮)
  • ನಾಡೋಜ ಹಂಪಿ ವಿ.ವಿ. (೧೯೯೮)
  • ಕರ್ನಾಟಕ ರಾಜ್ಯೋತ್ಸವ (೧೯೯೧)

ಹೀಗೆ ಹತ್ತು ಹಲವಾರು ಪ್ರಶಸ್ತಿಗಳು ಸಾಹಿತ್ಯ ಸೇವೆಗೆ ಸಂದವು. ಸಾಹಿತ್ಯ, ಸಂಗೀತ, ಸಮಾಜ ಹೀಗೆ ಹಲವು ಕ್ಷೇತ್ರಗಳಲ್ಲಿ ನಿರಂತರ ತೊಡಗಿದ ಅಜ್ಜನವರಿಗೆ ಸಾವಿರಾರು ತುಲಾಭಾರಗಳಾದವು. ಭಕ್ತಕೋಟಿ ಗೌರವಿಸಿ ನೀಡಿದ ಬಿರುದು ಬಾವಲಿಗಳನ್ನು ಬರೆದರೆ ಅದೊಂದು ಪುಸ್ತಕವೇ ಆಗುತ್ತದೆ.

ವಾಕ್ ಸಿದ್ಧಪುರುಷರಾದ ಇವರು ಕಂಪ್ಯೂಟರ್ ಯುಗದ ದೇವರೆಂದು ವಿಶ್ವದ ವಿಸ್ಮಯವೆಂದು ಬಣ್ಣಿಸಿದ್ದುಂಟು. ಅಂಧ, ಅನಾಥರಿಗೆ ತಂದೆಯಾಗಿ ಇವರು ಅಗಲಿದ್ದು ೧೭-೯-೨೦೧೦. ರಾಜ್ಯಾದ್ಯಂತ ರಜೆ ಘೋಷಿಸಿತ್ತು, ಲಕ್ಷಾನುಗಟ್ಟಲೇ ಜನಸ್ತೋಮ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿತು.

ರಾಷ್ಟ್ರಪತಿ ರಾಜೇಂದ್ರ ಪ್ರಸಾದ, ಬಿಸ್ಮಿಲ್ಲಾಖಾನ್, ಡಾ, ರಾಜಕುಮಾರ್ ಮುಂತಾದ ದಿಗ್ಗಜರಿಂದ ಸರ್ವಶ್ರೇಷ್ಠ ಕವಿಗಾಯಕರೆಂದು ಕರೆಸಿಕೊಂಡ ಡಾ. ಪುಟ್ಟರಾಜ ಗವಾಯಿಗಳು ಈ ನಾಡ ಸಂಗೀತ, ಸಾಹಿತ್ಯಕ್ಕೆ ಸದಾ ಚೈತನ್ಯ ಸ್ವರೂಪರು.

Leave a Reply

Your email address will not be published. Required fields are marked *