ಕನ್ನಡ ವರ್ಣಮಾಲೆ
ಭಾಷೆಯು ಮಾನವನ ಸಂಪರ್ಕ ಸಾಧನವಾಗಿದ್ದು, ಮಾತು ಮತ್ತು ಬರಹದ ಮೂಲಕ ಅದನ್ನು ವ್ಯಕ್ತಪಡಿಸುತ್ತೇವೆ. ಮಾತನಾಡುವ ಶಬ್ದಗಳನ್ನು ಬರೆದು ತೋರಿಸುವ ಚಿಹ್ನೆಗಳನ್ನು ಅಕ್ಷರಗಳೆಂದು ಕರೆಯುತ್ತೇವೆ. ಇಂತಹ ಅಕ್ಷರಗಳ ಸಮೂಹವನ್ನು ಲಿಪಿ ಎಂದು ಕರೆಯುತ್ತೇವೆ. ಭಾಷೆ ಮೊದಲು ಹುಟ್ಟುತ್ತದೆ. ಆಮೇಲೆ ಅದು ಬೆಳೆಯುತ್ತ ಹೋಗುತ್ತದೆ. ಅನಂತರ ವ್ಯಾಕರಣ ಹುಟ್ಟಿ, ಆ ಭಾಷೆಯನ್ನು ಕ್ರಮಬದ್ಧವಾಗಿಸಲು ಶ್ರಮಿಸುತ್ತದೆ. ವ್ಯಾಕರಣ ಕಲಿಯುವುದರಿಂದ ಭಾಷೆಯಲ್ಲಿ ಪ್ರಭುತ್ವ ಬರುತ್ತದೆ. ಭಾಷೆಯನ್ನು ಕ್ರಮವಾಗಿ, ಶುದ್ಧವಾಗಿ ಬಳಸಲು ವ್ಯಾಕರಣ ಕಲಿಯುವುದು ಅತ್ಯವಶ್ಯಕ.
ನಾವು ಭಾಷೆಯನ್ನು ಹೇಗೆ ಬಳಸಿದರೆ ಇತರರಿಗೆ ನಮ್ಮ ಅಭಿಪ್ರಾಯಗಳನ್ನು ಸರಿಯಾದ ರೀತಿಯಲ್ಲಿ ತಿಳಿಸಬಹುದು? ಭಾಷೆಯ ಸ್ವರೂಪವೇನು? ಅವುಗಳ ಭೇದಗಳಾವುವು? ಬರವಣಿಗೆಯನ್ನು ತಪ್ಪಿಲ್ಲದೆ ಹೇಗೆ ಬರೆಯಬೇಕು? ಮುಂತಾದ ವಿಷಯಗಳನ್ನು ತಿಳಿಸಿಕೊಡುವ ಶಾಸ್ತ್ರಕ್ಕೆ ವ್ಯಾಕರಣ ಎನ್ನುವರು. ಕನ್ನಡ ಭಾಷೆಯೂ ಸಹ ತನ್ನದೇ ಆದ ಲಿಪಿಯನ್ನು ಹೊಂದಿದ್ದು, ಅವುಗಳನ್ನು ವರ್ಣಮಾಲೆ ಎಂದು ಕರೆಯುತ್ತಾರೆ.
ಅಕ್ಷರ
‘ಕ್ಷರ’ ಎಂದರೆ ನಾಶ ‘ಅಕ್ಷರ’ ಎಂದರೆ ನಾಶವಿಲ್ಲದ್ದು ಎಂದರ್ಥ. ನಾವು ಮಾತನಾಡುವ ಧ್ವನಿ ಗಾಳಿಯಲ್ಲಿ ತೇಲಿ ಹೋಗಿ ಕೆಲವೇ ಕ್ಷಣಗಳಲ್ಲಿ ನಾಶವಾಗುತ್ತದೆ. ಅಂತಹ ಧ್ವನಿಗಳನ್ನು ನಾಶವಾಗದಂತೆ ಶಾಶ್ವತವಾಗಿ (ಅಕ್ಷರ ರೂಪದಲ್ಲಿ) ಹಿಡಿದಿಡುವ ಸಾಧನವೇ ಅಕ್ಷರ.
ವರ್ಣಮಾಲೆ
ಅಕ್ಷರಗಳನ್ನು ನಮ್ಮ ವೈಯಾಕರಣಿಗಳು ‘ವರ್ಣ’ ಎಂದು ಹೇಳಿ ಆ ವರ್ಣಗಳ ವ್ಯವಸ್ಥಿತವಾದ ಜೋಡಣೆಯನ್ನು ವರ್ಣಮಾಲೆ ಎಂದು ಕರೆದಿದ್ದಾರೆ. ಕನ್ನಡ ವರ್ಣಮಾಲೆಯು ಒಟ್ಟು 49 ಅಕ್ಷರಗಳನ್ನು ಒಳಗೊಂಡಿದ್ದು, ಅವುಗಳನ್ನು ಸ್ವರ(13), ವ್ಯಂಜನ(34) ಮತ್ತು ಯೋಗವಾಹ(2)ಗಳೆಂದು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.
ಸ್ವರಗಳು
ಸ್ವತಂತ್ರವಾಗಿ ಉಚ್ಛಾರ ಮಾಡಲು ಬರುವಂತಹ ಅಕ್ಷರಗಳು ಸ್ವರಗಳು ಅ,ಆ,ಈ,ಉ,ಊ,ಋ,ಎ,ಏ,ಐ,ಒ,ಓ,ಔ, ಇವುಗಲ್ಲಿ ಹೃಸ್ವ, ದೀರ್ಘ, ಫ್ಲುತ ಸ್ವರಗಳೆಂದು ಮೂರು ವಿಧಗಳಿವೆ.

